Indian Railways News => Topic started by railgenie on Jul 11, 2012 - 18:00:16 PM


Title - ಗಾಲಿಗಳ ಮೇಲೆ ಮನರಂಜನೆ...! -Prajavani
Posted by : railgenie on Jul 11, 2012 - 18:00:16 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಿಂದ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಚೆನ್ನೈಗೆ ತೆರಳುವವರಿಗೆ ಪ್ರಯಾಣದ ಅವಧಿಯಲ್ಲಿ ಇನ್ನು ಬೇಸರ ಕಾಡದು! ಹೊರಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನೂ `ಸುದ್ದಿ ಪ್ರೇಮಿ`ಗಳಿಗೆ ತಿಳಿಸುವ ವ್ಯವಸ್ಥೆ ಈ ರೈಲಿನಲ್ಲಿ ಆರಂಭವಾಗಿದೆ.

ಚೆನ್ನೈ ಮೂಲದ ಟ್ರಾನ್ಸ್ ವಿಷನ್ ಡಿಜಿಟಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿರುವ ನೈರುತ್ಯ ರೈಲ್ವೆ, ಬೆಂಗಳೂರು - ಚೆನ್ನೈ - ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಸೌಲಭ್ಯ ಆರಂಭಿಸಿದೆ. ಪ್ರತಿ ಬೋಗಿಯಲ್ಲಿ ತಲಾ ಎರಡು ಎಲ್‌ಸಿಡಿ ಪರದೆಗಳನ್ನು ಅಳವಡಿಸಲಾಗಿದೆ.
ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು, ವನ್ಯಜೀವಿ, ಯೋಗ ಮತ್ತು ಆರೋಗ್ಯ, ಹಾಸ್ಯ, ಸುದ್ದಿ, ಖ್ಯಾತನಾಮ ವ್ಯಕ್ತಿಗಳ ಸಂದರ್ಶನ, ಚಲನಚಿತ್ರಗಳ ಆಯ್ದ ಭಾಗಗಳು, ಸಾಕ್ಷ್ಯಚಿತ್ರಗಳು ಹಾಗೂ ಮಾಹಿತಿಪೂರ್ಣ ವಾಣಿಜ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು.

ಈ ಸೇವೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್ ಮುನಿಯಪ್ಪ ಮಂಗಳವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು.`ಬೆಂಗಳೂರು - ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲೂ ಇದೇ ಸೌಲಭ್ಯವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಲಾದ ಹೊಸ ರೈಲುಗಳ ಸಂಚಾರವನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ ಆರಂಭಿಸಲಾಗುವುದು` ಎಂದು ಭರವಸೆ ನೀಡಿದರು.

ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, `ಮಾಹಿತಿ ಹಾಗೂ ಮನರಂಜನೆ ನೀಡುವಾಗ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು` ಎಂದು ಮನವಿ ಮಾಡಿದರು. ಇದಕ್ಕೆ ರೈಲ್ವೆ ಅಧಿಕಾರಿಗಳಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಯಿತು.